ರಿಚರ್ಡ್‍ಸನ್, ದರೂತಿ
1873- ?.  ಪ್ರಸಿದ್ಧ ಇಂಗ್ಲಿಷ್ ಕಾದಂಬರಿ ಕಾರ್ತಿ. ಮಿಸೆಸ್ ಅಲನ್ ಓಡಲ್ ಈಕೆಯ ಮತ್ತೊಂದು ಹೆಸರು. ಆಕ್ಸ್‍ಫರ್ಡ್ ಬಳಿಯ ಸುಸಂಸ್ಕøತ ಕುಟುಂಬದಲ್ಲಿ ಈಕೆ ಹುಟ್ಟಿದಳು. ಈಕೆಯ ವಿದ್ಯಾಭ್ಯಾಸ ಖಾಸಗಿಯಾಗಿ ನಡೆಯಿತು. ತಾಯಿಯ ಮರಣಾ ನಂತರ ಆಸ್ತಿಯೆಲ್ಲ ಕಳೆದುಹೋದ್ದರಿಂದ ಕೆಲಕಾಲ ಜರ್ಮನಿಯಲ್ಲಿ ಇಂಗ್ಲಿಷ್ ಭಾಷೆ ಕಲಿಸುವ ಉದ್ಯೋಗಕ್ಕೆ ಸೇರಿದಳು. ಇಂಗ್ಲೆಂಡ್‍ಗೆ ಹಿಂದಿರುಗಿದ ಮೇಲೆ ಪತ್ರಿಕೋದ್ಯಮ ಮತ್ತು ಕಾರ್ಯದರ್ಶಿಯ ಕೆಲಸಗಳನ್ನು ಸ್ವಲ್ಪಕಾಲ ನಿರ್ವಹಿಸಿದಳು. ಸ್ತ್ರೀಯರಿಗೆ ಮತಚಲಾವಣೆಯ ಹಕ್ಕು ದೊರಕಿಸಲು ಈಕೆ ಆ ಕಾಲದ ಪ್ರಮುಖ ಮಹಿಳೆಯರೊಡಗೂಡಿ ಹೋರಾಡಿದಳು. ಆಗಲೇ ಇವಳು ತನ್ನದೇ ಆದ ಸಾಹಿತ್ಯ ಸಿದ್ಧಾಂತವನ್ನು ರೂಪಿಸಿಕೊಳ್ಳತೊಡಗಿದ್ದು. ಇವಳ ಜೀವನದ ಉಳಿದ ಕಾಲವೆಲ್ಲ ಆ ಸಿದ್ಧಾಂತವನ್ನು ಪ್ರತಿಪಾದಿಸುವಲ್ಲಿ, ಹಲವು ಸಂಪುಟಗಳಲ್ಲಿ ಪ್ರಕಟವಾದ ಪಿಲಿಗ್ರಿಮೇಜ್ ಎಂಬ ಕಾದಂಬರಿಯ ರಚನೆಯಲ್ಲಿ ಕಳೆಯಿತು.

ಪಿಲಿಗ್ರಿಮೇಜ್ ಕಾದಂಬರಿಯ ಮೊದಲ ಭಾಗ ಪಾಯಿಂಟೆಡ್ ರೂಫ್ಸ್. 1915ರಲ್ಲಿ ಪ್ರಕಟವಾಯಿತು. ಬ್ಯಾಕ್‍ವಾಟರ್, ಹನಿಕೊಂಬ್, ದಿ ಟನಲ್, ಇಟರಿಮ್, ಡೆಡ್‍ಲಾಕ್, ರಿವಾಲ್ವಿಂಗ್, ಲೈಟ್ಸ್, ದಿ ಟ್ರ್ಯಾಪ್, ಒಬರ್‍ಲೆಂಡ್, ಡಾನ್ಸ್ ಲೆಫ್ಟ್‍ಹ್ಯಾಂಡ್, ಕ್ಲಿಯರ್ ಹೊರೈಸನ್, ಡಿಂಪಲ್ ಹಿಲ್-ಇವು ಪಿಲಿಗ್ರಿಮೇಜ್ ಕಾದಂಬರಿಯ ಇತರ ಭಾಗಗಳು. ಕೊನೆಯ ಭಾಗ 1935ರಲ್ಲಿ ಬರೆದು ಮುಗಿಯಿತು. ಜೇಮ್ಸ್ ಜಾಯ್, ವರ್ಜೀನಿಯ ವುಲ್ಫ್-ಇವರು ಬಳಸಿದ ಪ್ರಜ್ಞಾಪ್ರವಾಹತಂತ್ರವನ್ನು ಪ್ರಪ್ರಥಮ ಬಾರಿಗೆ ಈಕೆ ಈ ಕಾದಂಬರಿಯಲ್ಲಿ ಬಳಸಿದಳು. 

ಈ ಕಾದಂಬರಿಯಲ್ಲಿ ಬರುವ ಮಿರಿಯಮ್ ಹೆಂಡರ್‍ಸನ್ ಪಾತ್ರ ಇಂಗ್ಲಿಷ್ ಕಾದಂಬರಿ ಪ್ರಪಂಚದಲ್ಲಿ ಒಂದು ವಿಶಿಷ್ಟ ಪಾತ್ರ. ಸಾಂಪ್ರದಾಯಿಕ ಸಂವಿಧಾನ ಈ ಕಾದಂಬರಿಯಲ್ಲಿ ಕಂಡುಬರುವುದಿಲ್ಲ. ಮಿರಿಯಮ್ ಹೆಂಡರ್‍ಸನ್ ತನ್ನ ದಿನದಿನದ ಬದುಕನ್ನು ಅನುಭವಿಸಿದ, ಹೊರಪ್ರಪಂಚದ ಪ್ರಚೋದನೆಗಳಿಗೆ ಪ್ರತಿಕ್ರಿಯಿಸಿದ ವಿವರಗಳನ್ನು ಈ ಕಾದಂಬರಿ ದಾಖಲಿಸುತ್ತ ಹೋಗುತ್ತದೆ. ಮಿರಿಯಮ್‍ಳಿಗೆ ಜೀವನ ಎಂಬುದು ಅಸಂಖ್ಯಾತ ಅಣುಗಳ ನಿರಂತರ ವೃಷ್ಟಿ. ಈ ಮಹಾ ಕಾದಂಬರಿಯನ್ನು ಓದುತ್ತಿದ್ದಾಗ ನಿರಂತರವಾದ ವರ್ತಮಾನದಲ್ಲಿದ್ದಂತೆ ಓದುಗರಿಗೆ ಭಾಸವಾಗುತ್ತದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ